ಮಂಕಡ್, ವಿನೂ
	1917-1978. ಬ್ಯಾಟಿಂಗ್, ಬೋಲಿಂಗ್, ಕ್ಷೇತ್ರ ರಕ್ಷಣೆ ಈ ಮೂರು ವಿಭಾಗಗಳಲ್ಲಿ ಪರಿಣತರಾಗಿದ್ದ ಅಸಾಧಾರಣ ಪ್ರತಿಭೆಯ ಕ್ರಿಕೆಟ್ ಕ್ರೀಡಾಪಟು. 1917 ಏಪ್ರಿಲ್ 12ರಂದು ಜಾಮ್‍ನಗರದಲ್ಲಿ ಜನಿಸಿದರು. (ರಣಜಿ, ದುಲೀಪ್ ಸಿನ್ಹ್‍ಜಿ, ಅಮರ್ ಸಿನ್ಹ್‍ಜಿಯಂಥ ಮಹಾನ್ ಕ್ರಿಕೆಟ್ ಪಟುಗಳೂ ಜಾಮ್ ನಗರದವರೇ). ಮೂಲ್ವಂತ್‍ರಾಯ್ ಹಿಮ್ಮತ್‍ಲಾಲ್ ಮಂಕಡ್ ಇವರ ಪೂರ್ಣ ಹೆಸರು. ಅಡ್ಡ ಹೆಸರು ಮೊದಲು ಮಿನೂ ಎಂದಿತ್ತು. ಮಿನೂ ಆಮೇಲೆ ವಿನೂ ಆಯಿತು. ಅನಂತರ ಇವರು ವಿನೂ ಮಂಕಡ್ ಎಂದೇ ಪ್ರಸಿದ್ಧರಾದರು. 

	ಇವರು ಓದಿದ ನವನಗರ್ ಪ್ರೌಢಶಾಲೆಯಲ್ಲಿದ್ದ ಒಂದೇ ಒಂದು ಕ್ರೀಡೆಯೆಂದರೆ ಕ್ರಿಕೆಟ್. ಮಂಕಡರು ಆ ಶಾಲೆಯಲ್ಲಿದ್ದಾಗಲೇ ತಮ್ಮ ಕ್ರಿಕೆಟ್ ಪ್ರತಿಭೆಯನ್ನು ಬೆಳಗಿದರು. ಒಮ್ಮೆ ಇವರು ಎದುರಾಳಿ ತಂಡದ ಹದಿನೈದು ವಿಕೆಟ್ಟುಗಳನ್ನು ಪಡೆದುಕೊಂಡಾಗ ನವನಗರದ ಜಾಮ್ ಸಾಹೇಬರು ಇವರ ಆಟವನ್ನು ಮೆಚ್ಚಿ ಆಗ ಪ್ರಸಿದ್ಧ ಕ್ರಿಕೆಟ್ ತರಬೇತುದಾರರಾಗಿದ್ದ ಬರ್ಟ್‍ವೆಸ್ಲಿಯವರಲ್ಲಿ ಕಲಿಯಲು ಇವರಿಗೆ ಅವಕಾಶ ಮಾಡಿಕೊಟ್ಟರು. ಮಂಕಡ್ ಆಗ ವೇಗದ ಬೋಲರ್ ಆಗಿದ್ದರು. ನಿಧಾನವಾದ ಬೋಲಿಂಗ್ ಅಭ್ಯಾಸ ಮಾಡಬೇಕೆಂಬ ವೆನ್‍ಸ್ಲಿಯವರ ಸೂಚನೆಯನ್ನು ಪರಿಪಾಲಿಸಿ ಮಂಕಡ್ ತಮ್ಮ ಕಾಲದ ಅತ್ಯಂತ ಶ್ರೇಷ್ಠ ಎಡಗೈ ಸ್ಪಿನ್ ಬೋಲರ್ ಆದರು. ಬ್ಯಾಟಿಂಗ್ ವಿಚಾರದಲ್ಲಿ ಇವರಿಗೆ ವಿಶೇಷ ತರಬೇತು ನೀಡಿದವರು ನವನಗರದ ಜಾಮ್ ಸಾಹೇಬರಾದ ದಿಗ್ವಿಜಯ ಸಿನ್ಹ್‍ಜಿಯವರ ಸೋದರ ದುಲೀಪ್‍ಸಿನ್ಹ್‍ಜಿ.

	1935ರಲ್ಲಿ, ಜಾಕ್ ರೈಡರ್ ನಾಯಕತ್ವದ ಆಸ್ಟ್ರೇಲಿಯನ್ ತಂಡದ ವಿರುದ್ಧ ಆಡಿದ್ದೇ ಮಕಂಡರ ಪ್ರಥಮ ದರ್ಜೆಯ ಪಂದ್ಯ. ಆದರೆ ಅದರಲ್ಲಿ ಇವರ ಆಟ ನಿರಾಶದಾಯಕವಾಗಿತ್ತು. 1935-36ರ ರಣಜಿ ಪಂದ್ಯಾವಳಿಯಲ್ಲೂ ಇವರು ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ಮುಂದಿನ ರಣಜಿ ಪಂದ್ಯಾವಳಿಯಲ್ಲಿ ಇವರು ನವನಗರ್ ತಂಡದ ಪರವಾಗಿ ಆಡಿ ಎಲ್ಲರ ಮೆಚ್ಚುಗೆಗಳಿಸಿದರು. 1937ರಲ್ಲಿ ಇಂಗ್ಲೆಂಡಿನ ಲಾರ್ಡ್ ಟೆನಿಸನ್ನರ ತಂಡದ ವಿರುದ್ಧ ನವನಗರ್ ಹನ್ನೊಂದು ತಂಡದ ಪರವಾಗಿ ಆಡಿ ಎರಡೂ ಸರದಿಗಳಲ್ಲಿ ಔಟಾಗದೆ ರನ್ನುಗಳನ್ನು ಗಳಿಸಿದರಲ್ಲದೆ, ಬೋಲ್ ಮಾಡಿ ಕಡಿಮೆ ರನ್ನುಗಳಿಗೆ ಹೆಚ್ಚು ವಿಕೆಟ್ಟುಗಳನ್ನು ಕೂಡ ಪಡೆದರು. ಸ್ವಂತಯೋಗ್ಯತೆಯಿಂದಲೇ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಇವರು ಟೆಸ್ಟ್ ಆಟಗಾರರಾಗಿ ಆಯ್ಕೆಯಾದರು. ಇವರು ಒಳ್ಳೆಯ ಆಟಗಾರರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ ಎರಡನೆಯ ಮಹಾಯುದ್ಧ ಬಂತು. ಇದರಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಡುವ ಅವಕಾಶ ಹಲವು ವರ್ಷಗಳ ಕಾಲ ಇವರಿಗೆ ದೊರಕದಂತಾಯಿತು. ತಾಯಿನಾಡಿನಲ್ಲಿ ರಣಜಿ ಹಾಗೂ ಪೆಂಟಾಂಗ್ಯುಲರ್‍ಗಳಲ್ಲಿ ಮಿಂಚಿದರು.

	1946ರಲ್ಲಿ ಇಂಗ್ಲೆಂಡಿಗೆ ಭೇಟಿ ನೀಡಿದ ಭಾರತತಂಡದಲ್ಲಿ ಮಂಕಡರೂ ಇದ್ದರು. ಆವೇಳೆಗೆ ಇವರ ಕೀರ್ತಿ ಇಂಗ್ಲೆಂಡನ್ನು ತಲಪಿತ್ತು. 29ನೆಯ ವಯಸ್ಸಿನಲ್ಲಿ ಇಂಗ್ಲೆಂಡಿನ ಲಾಡ್ರ್ಸ್‍ನಲ್ಲಿ ಇವರು ಮೊದಲ ಬಾರಿಗೆ ಆಡಿದರು. ವಿಜಯ ಮರ್ಚೆಂಟ್‍ರೊಂದಿಗೆ ಆರಂಭದ ಆಟಗಾರರಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೋಲಿಂಗೂ ಅಸಾಧಾರಣವಾಗಿತ್ತು. ಎರಡನೆಯ ಟೆಸ್ಟ್ ಪಂದ್ಯದಲ್ಲಿ ಅಮರನಾಥ್‍ರ ಜೊತೆಯಾಟದಲ್ಲಿ ಇವರು ಶೋಭಿಸಿದರು. ಬೋಲ್ ಮಾಡಿ ಐದು ವಿಕೆಟ್ ಪಡೆದರು ಆ ವರ್ಷದ ಐವರು ಶ್ರೇಷ್ಠ ಕ್ರಿಕೆಟ್ ಪಟುಗಳಲ್ಲೊಬ್ಬರೆಂದು ಇವರು ಪರಿಗಣಿತರಾದರು.

	ಯಶಸ್ಸಿನಿಂದ ಬೀಗದೆ ಸದಾ ಆತ್ಮವಿಮರ್ಶೆ ಮಾಡಿಕೊಳ್ಳುತ್ತ ಮತ್ತು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತ ಮುನ್ನಡೆಯುವುದು ಮಂಕಡರ ವಿಧಾನವಾಗಿತ್ತು. ಅಮರನಾಥ್ ನಾಯಕತ್ವದ 1947ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಲ್ಲಿಯ ವೇಗದ ಬೋಲರಾದ ರೇ ಲಿಂಡ್‍ವಾಲರ ಚೆಂಡಿನ ಮುಂದೆ ಮಂಕಡ್ ತತ್ತರಿಸುತ್ತಿದ್ದರು. ಭೋಜನಕೂಟವೊಂದರಲ್ಲಿ ಮಂಕಡರು ಲಿಂಡವಾಲರನ್ನೇ ತಮ್ಮ ತಪ್ಪು ತೋರಿಸಿಕೊಡುವಂತೆ ಕೇಳಿದರು. ವೇಗದ ಬೋಲಿಂಗಿಗೆ ಮಂಕಡ್ ಬ್ಯಾಟ್ ನಿಧಾನವಾಗಿ ಚಲಿಸುವುದರಿಂದ ಹೀಗಾಗುತ್ತಿದೆಯೆಂದು ಲಿಂಡ್‍ವಾಲ್ ಹೇಳಿದರು. ಮಂಕಡ್ ಮುಂದಿನ ಆಟದಲ್ಲಿ ತಮ್ಮ ತಪ್ಪು ತಿದ್ದಿಕೊಂಡರು. ಮೆಲ್ಬರ್ನ್ ಟೆಸ್ಟಿನಲ್ಲಿ ಎರಡು ಶತಕ ಬಾರಿಸಿದರು. ಅಲ್ಲಿ ಮಂಕಡರ ಬೋಲಿಂಗ್ ಅಸಾಧಾರಣದಾಗಿತ್ತು. ಇಡೀ ಸರಣೆಯಲ್ಲಿ ಇವರು ಪಡೆದ ವಿಕೆಟ್ಟುಗಳು ಹನ್ನೆರಡು. ಆಸ್ಟ್ರೇಲಿಯಾ ಪ್ರವಾಸದ ಅನಂತರ ಇವರು ಲ್ಯಾಂಕಷರ್ ಲೀಗ್ ಕ್ರಿಕೆಟ್ಟಿನಲ್ಲಿ ಭಾಗವಹಿಸಿದರು. ಕ್ರಿಕೆಟ್ ವೃತ್ತಿ ನಿರತರಾಗಿ ಇವರು ಪಡೆಯುತ್ತಿದ್ದ ವೇತನ ಉಳಿದವರು ಪಡೆಯುತ್ತಿದ್ದುದಕ್ಕಿಂತ ಅಧಿಕವಾಗಿತ್ತು. 

	1948-49ರಲ್ಲಿ ಭಾರತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇವರ ಬ್ಯಾಟಿಂಗ್ ಅಷ್ಟೇನೂ ಸಮರ್ಪಕವಾಗಿರಲಿಲ್ಲ. ಆದರೆ ಬೋಲಿಂಗ್ ಅತ್ಯುತ್ತಮವಾಗಿದ್ದರೂ ಇವರು ಒಟ್ಟು 17 ವಿಕೆಟ್ ಪಡೆದರು. 1951-52ರ ಸರಣೆಯಲ್ಲಿ ಇವರ ಬೋಲಿಂಗ್ ಅತ್ಯುನ್ನತ ಮಟ್ಟ ಮುಟ್ಟಿತ್ತು. ಇಂಗ್ಲೆಂಡ್ ತಂಡ ಇವರ ಬೋಲಿಂಗಿಗೆ ತತ್ತರಿಸಿತು. ಆಗ ಇವರು ಗಳಿಸಿದ ವಿಕೆಟ್ಟುಗಳ ಸಂಖ್ಯೆ 34. ಇಪ್ಪತ್ನಾಲ್ಕು ವರ್ಷಗಳ ಅನಂತರ ಚಂದ್ರಶೇಖರ್ ಈ ವಿಕ್ರಮವನ್ನು ಮುರಿದರು. ಮದರಾಸು ಟೆಸ್ಟಿನಲ್ಲಿ ಭಾರತ ವಿಜಯಗಳಿಸಲು ಮಂಕಡರ ಬೋಲಿಂಗ್ ಮುಖ್ಯ ಕಾರಣವಾಯಿತು. ಇದರಲ್ಲಿ ಇವರು ಪಡೆದ ವಿಕೆಟ್ಟುಗಳು 12. ಮೊದಲ ಸರದಿಯಲ್ಲಿ 38.5 ಓವರ್ ಬೋಲ್ ಮಾಡಿದರು. ಅವುಗಳಲ್ಲಿ 15 ಓವರುಗಳು ಮೇಡನ್, ನೀಡಿದ ರನ್ನುಗಳು 55, ಪಡೆದ ವಿಕೆಟ್ಟುಗಳು 8. 

	1952ರ ಇಂಗ್ಲೆಂಡ್ ಪ್ರವಾಸದ ಎರಡನೆಯ ಟೆಸ್ಟ್‍ನಲ್ಲಿ (ಲಾಡ್ರ್ಸ್) ಮಂಕಡ್ ಆಡಿದ ಆಟವೂ ಚಿರಸ್ಮರಣೀಯ. ಮೊದಲ ಟೆಸ್ಟಿಗೆ ಇವರನ್ನು ಸೇರಿಸಿಕೊಂಡಿರಲಿಲ್ಲ. ಎರಡನೆಯದರಲ್ಲಿ ಮೊದಲ ಸರಣಿಯಲ್ಲಿ ಭಾರತ ಪಡೆದ 106 ರನ್ನುಗಳಲ್ಲಿ ಮಂಕಡರವು 72. ಇವರು ದೀರ್ಘಕಾಲ ಬೋಲ್ ಮಾಡಿ 73 ಓವರುಗಳಲ್ಲಿ 196ರನ್ ಕೊಟ್ಟು 5 ವಿಕೆಟ್ ಗಳಿಸಿಕೊಂಡರು. ಎರಡನೆಯ ಇನ್ನಿಂಗ್ಸ್ ಆರಂಭಿಸಿದಾಗ ಭಾರತ ಇಂಗ್ಲೆಂಡಿಗಿಂತ 302 ರನ್ ಹಿಂದೆ ಇತ್ತು. ಪಂಕಜರಾಯ್‍ರೊಂದಿಗೆ ಮಂಕಡ್ ಭಾರತದ ಬ್ಯಾಟಿಂಗ್ ಆರಂಭಿಸಿ ನಾಲ್ಕೂವರೆ ಗಂಟೆಗಳಲ್ಲಿ 184ರನ್ ಮಾಡಿದರು. ಇದರಿಂದ ಭಾರತ ಗೆಲ್ಲಲಿಲ್ಲವಾದರೂ ಇವರು ಆಡಿದ ಆಟ ಚಿರಸ್ಮರಣೀಯವಾದುದು. ಎರಡು ತಿಂಗಳ ಅನಂತರ ಪಾಕಿಸ್ತಾನದ ವಿರುದ್ಧ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಇವರ ಬೋಲಿಂಗ್ ಅದ್ಭುತವಾಗಿತ್ತು. ಮೊದಲ ಇನ್ನಿಂಗ್ಸ್‍ನಲ್ಲಿ ಇವರು ಮಾಡಿದ ಓವರ್‍ಗಳು 47, ಅವುಗಳಲ್ಲಿ ಮೇಡನ್ 27, ನೀಡಿದ ರನ್ 32, ಪಡೆದ ವಿಕೆಟ್ 8. ಆಗ ಪಾಕಿಸ್ತಾನ ಇನಿಂಗ್ಸ್ ಸೋಲು ಅನುಭವಿಸಿತು. ಮುಂಬಯಿಯ 3ನೆಯ ಟೆಸ್ಟಿನಲ್ಲಿ ಇವರು 124ಕ್ಕೆ 8 ವಿಕೆಟ್ ಗಳಿಸಿ ಮತ್ತೆ ಭಾರತ ಗೆಲ್ಲಲ್ಲು ನೆರವಾದರು.

	1953ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದಾಗ ಮಂಕಡ್ ಈ ತಂಡದ ಉಪನಾಯಕರೂ 1954-55ರಲ್ಲಿ ಪಾಕಿಸ್ತಾನದ ಪ್ರವಾಸದ ಭಾರತ ತಂಡಕ್ಕೆ ನಾಯಕರೂ ಆಗಿದ್ದರು. ಆದರೆ ನಾಯಕರಾಗಿ ಇವರು ಯಶಸ್ವಿಯಾಗಲಿಲ್ಲ. 1955-56ರಲ್ಲಿ ಭಾರತಕ್ಕೆ ಬಂದ ಆಸ್ಟ್ರೇಲಿಯ ತಂಡದ ಎದುರು ಇವರು ಶ್ರೇಷ್ಠ ಆಟ ಆಡಿದರು. ಮುಂಬಯಿ ಮದರಾಸುಗಳಲ್ಲಿ ಇವರು ಎರಡೆರಡು ಶತಕ (223 ಮತ್ತು 231) ಬಾರಿಸಿದರು. ಮದರಾಸಿನಲ್ಲಿ ಪಂಕಜರಾಯ್‍ರೊಂದಿಗೆ ಮೊದಲನೆಯ ವಿಕೆಟ್ ಜೊತೆಯಾಟದಲ್ಲಿ ಅದುವರೆಗೆ ಯಾವ ಜೋಡಿಯೂ ಗಳಿಸದ 413ರನ್ನು ಗಳಿಸಲು ಕಾರಣರಾದರು. ಆದರೆ ಇವರ ಬೋಲಿಂಗ್ ಪೇಲವವಾಗಿತ್ತು. ಒಟ್ಟಿನಲ್ಲಿ ಆ ಸರಣಿಯಲ್ಲಿ ಇವರು ಒಟ್ಟು 2000ರನ್ನು ಹಾಗೂ 100 ವಿಕೆಟ್ ಮಟ್ಟ ಮುಟ್ಟಿದರು. ಅನಂತರ ಆಸ್ಟ್ರೇಲಿಯದ ಮೇಲೆ ಆಡಿದ ಬ್ಯಾಟಿಂಗ್ ಅಥವಾ ಬೋಲಿಂಗ್ ಯಾವುದರಲ್ಲೂ ಇವರು ಉತ್ತಮ ಪ್ರದರ್ಶನ ನೀಡಲಿಲ್ಲ. 1961-62ರಲ್ಲಿ ಇವರು ಆಟದಿಂದ ನಿವೃತ್ತರಾಗಿ ಕ್ರಿಕೆಟ್ ಆಟಗಾರರಿಗೆ ತರಬೇತಿ ನೀಡಲಾರಂಭಿಸಿದರು. ಏಕನಾಥ ಸೋಲ್ಕರ್, ಅಶೋಕ ಮಂಕಡ್, ಉಮೇಶ ಕುಲಕರ್ಣಿ, ಶರದ ಹಜಾರೆ ಮತ್ತು ಕೈಲಾಸ್ ಗಟ್ಟಾನಿ ಮೊದಲಾದ ಪ್ರಸಿದ್ಧ ಕ್ರಿಕೆಟ್ ಪಟುಗಳು ಇವರಲ್ಲಿ ತರಬೇತಿ ಪಡೆದವರಾಗಿದ್ದಾರೆ.

	ಭಾರತ ಸರ್ಕಾರ ಮಂಕಡರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 1967ರಲ್ಲಿ ಇವರಿಗೆ ಎಂ.ಸಿಸಿ.ಯ ಗೌರವ ಸದಸ್ಯತ್ವ ದೊರಕಿತು. 1979ರ ಆಗಸ್ಟ್ 21ರಂದು ತೀರಿಕೊಂಡರು.
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ